ಈಗಾಗಲೇ ಸ್ಥಾಪಿಸಿರುವ 14 ವಿ-ಸ್ಯಾಟ್ ಆಧಾರಿತ ಶಾಶ್ವತ ಭೂಕಂಪನ ಮಾಪನ ಕೇಂದ್ರಗಳಲ್ಲಿ, ಅಣೆಕಟ್ಟು ಸುರಕ್ಷತೆಯ ದೃಷ್ಟಿಯಿಂದ 10 ಕೇಂದ್ರಗಳನ್ನು ಆಣೆಕಟ್ಟುಗಳ ಸಮೀಪ ಸ್ಥಾಪಿಸಲಾಗಿದೆ. ಅವುಗಳಲ್ಲಿ ಆಲಮಟ್ಟಿ ಆಣೆಕಟ್ಟು (ವಿಜಯಪುರ ಜಿಲ್ಲೆ), ಹಿಡಕಲ್ ಆಣೆಕಟ್ಟು (ಬೆಳಗಾವಿ ಜಿಲ್ಲೆ), ಸುಪಾ ಆಣೆಕಟ್ಟು (ಉತ್ತರ ಕನ್ನಡ ಜಿಲ್ಲೆ), ತುಂಗಭದ್ರಾ ಆಣೆಕಟ್ಟು (ಕೊಪ್ಪಳ ಜಿಲ್ಲೆ), ಲಿಂಗನಮಕ್ಕಿ ಆಣೆಕಟ್ಟು(ಶಿವಮೊಗ್ಗ ಜಿಲ್ಲೆ), ಹೇಮಾವತಿ ಆಣೆಕಟ್ಟು(ಹಾಸನ ಜಿಲ್ಲೆ), ಹಾರಂಗಿ ಆಣೆಕಟ್ಟು (ಕೊಡಗು ಜಿಲ್ಲೆ), ಕೃಷ್ಣರಾಜಸಾಗರ ಆಣೆಕಟ್ಟು (ಮೈಸೂರು ಜಿಲ್ಲೆ), ಗುಂಡಾಲ್ ಜಲಾಶಯ (ಚಾಮರಾಜನಗರ ಜಿಲ್ಲೆ) ಮತ್ತು ತಿಪ್ಪಗೊಂಡನಹಳ್ಳಿ ಆಣೆಕಟ್ಟು (ಬೆಂಗಳೂರು ಜಿಲ್ಲೆ) ಗಳಲ್ಲಿ ಸ್ಥಾಪಿಸಲಾಗಿದೆ. ವಿ ಸ್ಯಾಟ್ ಮತ್ತು 20 ಕೆ ಬಿ ಪಿ ಎಸ್ ಬ್ಯಾಂಡ್-ವಿಡ್ತ್ ಸಹಾಯದಿಂದ ಎಲ್ಲಾ ಕೇಂದ್ರಗಳು ಬೆಂಗಳೂರಿನ ಕೇಂದ್ರ ಕಚೇರಿಗೆ ನಿಜ ಸಮಯದಲ್ಲಿ ದತ್ತಾಂಶಗಳನ್ನು ರವಾನೆ ಮಾಡುತ್ತಿರುತ್ತವೆ ಮತ್ತು ಈ ದತ್ತಾಂಶಗಳನ್ನು ಪರಿಶೀಲಿಸಿ ಸ್ಥಳೀಯ, ಪ್ರಾಂತೀಯ ಮತ್ತು ಟೆಲಿ-ಸಿಸ್ಮಿಕ್ ಭೂಕಂಪನಗಳನ್ನಾಗಿ ವಿಂಗಡಣೆ ಮಾಡಲಾಗುತ್ತದೆ. ವಿಶ್ಲೇಷಿಸಿದ ಮಾಹಿತಿಯನ್ನು ದೈನಂದಿನಕ ವರದಿ ರೂಪದಲ್ಲಿ ಸಂಬಂಧಪಟ್ಟ ರಾಜ್ಯ, ಜಿಲ್ಲೆ, ತಾಲ್ಲೂಕ್ ಮತ್ತು ಗ್ರಾಮ ಪಂಚಾಯತಿ ಮಟ್ಟದ ಅಧಿಕಾರಿಗಳಿಗೆ ಮತ್ತು ಅಣೆಕಟ್ಟುಗಳ ಅಭಿಯಂತರುಗಳಿಗೆ ಎಸ್ ಎಂ ಎಸ್ ಮತ್ತು ಇ-ಮೇಲ್ ಮುಕಾಂತರ ತಾಂತ್ರಿಕ ವರದಿಗಳನ್ನು ಕಳುಹಿಸಲಾಗುತ್ತದೆ. ಸ್ಥಳೀಯ ಭೂಕಂಪನಗಳು ಸಂಭವಿಸಿದರೆ, ತಾಂತ್ರಿಕ ವರದಿ ಮತ್ತು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ಜಿಲ್ಲಾಧಿಕಾರಿಗಳು, ಆಯುಕ್ತರು, ತಹಸೀಲ್ದಾರರು, ಮುಖ್ಯ ಅಭಿಯಂತರರು ಮತ್ತು ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ಕಳುಹಿಸಿಕೊಡಲಾಗುತ್ತದೆ.